Monday, October 18, 2010

ಬದುಕು ಒಂದು ಸುಂದರ ನಾಯಿಪಾಡು - ೧

ನಾಗರಾಜ ಇಂಜಿನಿರಿಂಗ್  ಫೈನಲ್ ಸೆಮೆಸ್ಟರ್ ನ ಕೊನೆಯ ಪರೀಕ್ಷೆ ಮುಗಿದ ಮಾರನೇ ದಿನವೇ ಎಲ್ಲರೂ ಬಂದು ಬಳ್ಳಿ ಹಾಕಂಬ ಜಾಗಕ್ಕೆ ಬಂದು ಬಿಟ್ಟಿದ್ದ. ಫೈನಲ್ ಸೆಮೆಸ್ಟರ್ ಪರೀಕ್ಷೆ ಸಮಯದಲ್ಲೇ ಬೆಂಗಳೂರಿನಲ್ಲಿ ಗೆಳೆಯರ ಜೊತೆ ಉಳಿದು ಕೊಳ್ಳುವ ವ್ಯವಸ್ಥೆ  ಮಾಡಿಕೊಂಡಿದ್ದ.  ಆತ ಓದಿದ ಕಾಲೇಜಿನಲ್ಲಿ ಕ್ಯಾಂಪಸ್ ಇಂಟರ್ ವ್ಯೊ ಇರದ ಕಾರಣ ಬೆಂಗಳೂರಿಗೆ ಬಂದು ಕೆಲಸ ಹುಡುಕಿಕೊಳ್ಳುವ ಅನಿವಾರ್ಯತೆ ಇತ್ತು.

ವಾಸುದೇವ ಮಾಸ್ತರಿಗೆ ಮಗ ಇಂಜಿನಿಯರ್ ಆಗುವುದು ಅಷ್ಟು ಇಷ್ಟ ಇರಲಿಲ್ಲ ಅಂತ ಕಾಣುತ್ತೆ, ಪಿಯುಸಿ ಮುಗಿದಮೇಲೆ ಮಾಣಿ ಟಿಸಿಚ್ ಮಾಡು, ಮನೇಲಿ ದೇವರ ಪೂಜೆ ಮಾಡ್ಕಂಡು ಶಾಲೆ ಮಾಸ್ತರ್ಕಿ ಮಾಡ್ಲಕ್ಕು ಅಂತ ಹೇಳ್ತಾನೇ ಇರ್ತಿದ್ದರು. ಅದಕ್ಕಾಗಿ ನಾಗರಾಜ ತಾನು ಬೆಂಗಳೂರಿಗೆ ಬರುವಾಗ ತಂದಿದ್ದ ಹದಿನೈದು ಸಾವಿರ ಖಾಲಿ ಆಗುವಷ್ಟರಲ್ಲಿ ತಾನೊಂದು ಕೆಲಸ ಹುಡ್ಕಳವು ಅಂತ ತಂಗಿ ಮತ್ತು ಅಮ್ಮನಿಗೆ ಹೇಳಿ ಬೆಂಗಳೂರು ಬಸ್ಸು ಹತ್ತಿದ್ದ.

ನಾಗರಾಜ ದಿನಾಲು ಬೆಳಿಗ್ಗೆ ದೇವರಪೂಜೆಗೆ ಹೂ ಕೊಯ್ಯುವ ಕೆಲಸ ತಪ್ಪದೇ ಮಾಡುತ್ತಿದ್ದ. ಅವ ಬೆಂಗಳೂರಿನ ಹಾದಿ ಹಿಡಿದ ಮೇಲೆ ಆ ಕೆಲಸ ತಂಗಿ ಶಾಂತಾಳಿಗೆ ಬಂತು. ಮೊದಮೊದಲಿಗೆ ಖುಷಿಯಿಂದನೇ ಈ ಕೆಲಸ ಮಾಡ್ತಿದ್ದ ಅವಳಿಗೆ ಆಮೇಲೆ ಬೇಜಾರು ಬರಲಿಕ್ಕೆ ಶುರುವಾಯ್ತು. ಬೇರೆ ಎಲ್ಲಾ ಹೂವನ್ನು ಬೇಗಬೇಗ ಕೊಯ್ಯುತ್ತಿದ್ದ ಅವಳು, ೧೦೮ ಕರ್ಕಿ ಕೊಯ್ಯುದಂದ್ರೆ ಸ್ವಲ್ಪ ಅಲರ್ಜಿ. ಆವಾಗೆಲ್ಲಾ ಅಣ್ಣಯ್ಯ ದೇವರಪೂಜೆ ಮಾಡ್ಕಂಡು ಇಲ್ಲೇ ಇರ್ಲಕಿತ್ತು ಅಂತ ಅಪ್ಪಯ್ಯನಿಗೆ ಹೇಳುತ್ತಿದ್ದಳು.

ಬೆಂಗಳೂರಿಗೆ ಬಂದ ಮೇಲೆ  ನಾಗರಾಜನ ದಿನಚರಿಯೇ ಬದಲಾಗಿ ಹೋಯ್ತು. ರಾಜಾಜಿನಗರದ ಭಾಷ್ಯಂ ಸರ್ಕಲ್ ಹತ್ತಿರ ೩ ಜನ ಗೆಳೆಯರೊಂದಿಗೆ ೨೧೦೦ ರೂ. ಬಾಡಿಗೆ ರೂಮ್ ಮಾಡಿಕೊಂಡು ಇದ್ದ. ದಿನಾಲು ಬೆಳಿಗ್ಗೆ ಎದ್ದು ೮ ಗಂಟೆಗೆ ೮೦ ನಂ. ಬಸ್ಸು ಹಿಡಿದು ಮೆಜೆಸ್ಟಿಕ್ ಗೆ ಹೋಗುವುದು. ಅಲ್ಲಿ ೧೦ ನಂ ಫ್ಲಾಟಫಾರಂ ನಲ್ಲಿ ಬೇರೆ ಕಡೆಯಿಂದ ಬರುವ ಉಳಿದ ಗೆಳೆಯರಿಗೆ ಕಾಯುವುದು. ಎಲ್ಲರೂ ಸೇರಿದ ಮೇಲೆ ಗಾಂಧಿನಗರದ ವಿಜಯಕೆಫೆ ಹೊಟೆಲ್ ನ ಪಕ್ಕದ ಜೆರಾಕ್ಸ್ ಅಂಗಡಿಗೆ ಹೋಗಿ ರೆಸ್ಯುಮ್ ಜೆರಾಕ್ಸ್ ಮಾಡುತ್ತಿದ್ದರು. ಪುನಃ ಮೆಜೆಸ್ಟಿಕ್ ಗೆ ಬಂದು ಐಟಿ ಕಂಪನಿಗಳು ಇರುವ ಕಡೆ ಹೋಗುವ ಬಸ್ಸು ಹತ್ತಿ  ಕೆಲಸದ ಬೇಟೆಗೆ ಹೊರಡುತ್ತಿದ್ದರು. ಮದ್ಯಾಹ್ನದವರೆಗೂ ಅಲೆದು, ಎಲ್ಲಾದರೂ ಊಟ ಮಾಡಿ ಉತ್ಸಾಹ ಇದ್ದರೆ ಮತ್ತೆ ಬೇಟೆ ಮುಂದುವರೆಸುತ್ತಿದ್ದರು, ಇಲ್ಲದಿದ್ದರೆ ರೂಮಿಗೆ ಹೋಗಿ ಮಲಗುವುದೋ ಇಲ್ಲಾ ರಿಂಗ್ ರೋಡ್ ಬಸ್ಸು ಹತ್ತಿ ಕೊನೆ ಸೀಟಲ್ಲಿ ನಿದ್ದೆ ಹೊಡೆಯುವುದೋ ಮಾಡುತ್ತಿದ್ದರು.

ಯಶೋದಮ್ಮ ದಿನಾ ರಾತ್ರಿ ನಾಗರಾಜನಿಗೆ  ಫೋನ್ ಮಾಡುತ್ತಿದ್ದರು, ಮೊದಮೊದಲಿಗೆ ನಾಗರಾಜ  ದಿನಚರಿಯನ್ನು ಉತ್ಸಾಹದಿಂದಲೇ ಹೇಳುತ್ತಿದ್ದ. ಒಂದಿನ ಇಲೆಕ್ಟ್ರಾನಿಕ್ ಸಿಟಿ, ಇನ್ನೊಂದು ದಿನ ಕೋರಮಂಗಲ ಹೀಗೆ ಅಲೆದಾಟ ಮುಂದುವರೆದೇ ಇತ್ತು. 
ಕೆಲವೊಬ್ಬರು ರೆಸ್ಯೂಮ್ ತಗಂಡು ಕಳಿಸಿದರೆ, ಇನ್ನು ಕೆಲವರು ರೆಸ್ಯೂಮ್ ತೆಗೆದುಕೊಳ್ಳಲೂ ಒಪ್ಪದೇ ಹಾಗೆ ಕಳಿಸುತ್ತಿದ್ದರಂತೆ.
ಇದರ ನಡುವೆಯೂ ಹೊಸ ಹೊಸ ಫಿಲ್ಮು  ಬಿಡುಗಡೆ ಆಗುತ್ತಿದ್ದಂತೆ ನೋಡಿ, ಅದರಲ್ಲಿ ಹಾಂಗಿದ್ದು/ಹೀಂಗಿದ್ದು ಹೇಳಿ ಶಾಂತಾಳ ಹೊಟ್ಟೆ ಉರಿಸುತ್ತಿದ್ದ. 
ತಿಂಗಳು ಕಳೆದಂತೆ ಎಲ್ಲೂ ಸಂದರ್ಶನ ಕರೆ ಬಾರದಿದ್ದಾಗ ಸ್ವಲ್ಪ ಡಲ್ ಆಗತೊಡಗಿದ. ಯಶೋದಮ್ಮನಾಗಲೀ, ಶಾಂತಾಳಾಗಲೀ ಎಲ್ಲಾದರೂ ಇಂಟರ್ವ್ಯೂ ಸಿಕ್ತನಾ ಕೇಳಿದ್ರೆ, ಅವರ ಮೇಲೆಯೇ ರೇಗುತ್ತಿದ್ದ. ಎಂತಾ ಅದು ದಿನಾ ಕೇಳುದು? ಕೆಲಸ ಸಿಕ್ಕಾಗ ನಾನೇ ಹೇಳ್ತೆ ಅನ್ನುತ್ತಿದ್ದ. ನಂತರ ಅವರೂ ಕೆಲಸದ ಬಗ್ಗೆ ಕೇಳುವುದನ್ನು ಕಮ್ಮಿ ಮಾಡಿದರೂ. ಆದರೂ ಒಮ್ಮೊಮ್ಮೆ  ಯಶೋದಮ್ಮ ತಡೆಯಲಾಗದೇ ಕೇಳಿ, ಅವ ರೇಗಿದಾಗ ನಂತರ ಅಳುತಿದ್ದರು.

(ಮುಂದುವರೆಯುವುದು.......)

5 comments:

  1. ಹವ್ಯಕ ಭಾಷೆ ಶಬ್ದಗಳು ಒಂಥರಾ ಮಜಾ ಮಿಕ್ಸ್ ಆಗಿವೆ.. :-)
    ಮುಂದುವರೆಸಿ..!

    ReplyDelete
  2. ಬೆಂಗಳೂರಿಗೆ ಕೆಲ್ಸಾ ಹುಡುಕಿಕೊಂಡು ಬರುವ ಒಬ್ಬಬ್ಬರದೂ ಒಂದು ಕಥೆ.
    ಕೆಲವು ಅದೃಷ್ಟವಂತರು ಮನೆಲ್ಲಿದ್ದುಕೊಂಡೆ ಕೆಲಸ ಗಿಟ್ಟಿಸಿಕೊಂಡಿರ್ತಾರೆ (reference ಹಾಳು-ಮೂಳು ಅಂತ ಇರ್ತಾವಲ್ಲ )
    ಒಳ್ಳೆ ವಿಷಯದ ಬಗ್ಗೆ ಬರಿತಾಯಿದೀರ, ಖುಷಿಯಾಯ್ತು. Go ahead . . .
    ಅಂದ ಹಾಗೆ ನನ್ನ ಹೆಸರು ತಿಳಿದಿರಬೇಕಲ್ಲ . . . .?
    (ನಿಮ್ಮ ಬರಹದಲ್ಲಿ ಬಂದ ನಾಗರಾಜ ನಾನ ? ಹ್ಹ ಹ್ಹ ಹ್ಹ)

    ReplyDelete
  3. ಸುಶ್ರುತರೇ,
    ಧನ್ಯವಾದಗಳು.

    ನಾಗರಾಜರೇ,
    ಧನ್ಯವಾದ, ಹೆಸರು ನಿಮ್ಮದೇ :)

    ReplyDelete
  4. ಚೆನ್ನಾಗಿದೆ.. ಹವ್ಯಕ ಭಾಷೆಯ ಸೊಗಡು ಅಲ್ಲಲ್ಲಿ ಕಾಣಿಸಿದ್ದು ಇಷ್ತವಾಯ್ತು.
    ಮು೦ದುವರೆಸಿ.

    ReplyDelete